ಬಾಲ್ಜಾಕ್ ಆನೋರೆ ಡೀ 	
1799-1850. ಫ್ರೆಂಚ್ ಕಾದಂಬರಿ ಪ್ರಕಾರಕ್ಕೆ ಹೊಸ ಆಯಾಮ ಕೊಟ್ಟ ಕಾದಂಬರಿಕಾರ. ವೈವಿಧ್ಯಮಯವಾದ ಸಹಸ್ರಾರು ಪಾತ್ರಗಳನ್ನು ಸೃಜಿಸಿ ಶ್ರೇಷ್ಠವಾದ ವಾಸ್ತವಿಕ ರಮ್ಯ ಹಾಗೂ ಐತಿಹಾಸಿಕ ಕಾದಂಬರಿಗಳನ್ನು ರಚಿಸಿ ಪ್ರಪಂಚ ದಾಖಲೆ ಸ್ಥಾಪಿಸಿದ ಸೃಜನಶೀಲ ಸಾಹಿತಿ. ಹುಟ್ಟಿದ್ದು ಟೂರ್ ಎಂಬಲ್ಲಿ. ತಂದೆ ಸ್ವಸಾಮಥ್ರ್ಯದಿಂದ ಮುಂದೆ ಬಂದ ರೈತ. ತಾಯಿ ಪ್ಯಾರಿಸಿನ ಸಿರಿವಂತ ವರ್ತಕನ ಮಗಳು. ಈಕೆ ಶಿಸ್ತಿನಿಂದ ಮಕ್ಕಳನ್ನು ಬೆಳೆಸಿದಳು. ಎಂಟನೆಯ ವಯಸ್ಸಿಗೆ ಬಾಲ್ಜಾಕ್ ಶಿಕ್ಷಣಕ್ಕಾಗಿ ವೆಂಡೋಮ್ ವಸತಿ ಶಾಲೆಗೆ ಸೇರಿದ. ಶಾಲೆಯ ಓದಿನಲ್ಲಿ ಎಷ್ಟೂ ಆಸಕ್ತಿ ತೋರಿದರೆ ಈತ ಪುಸ್ತಕಗಳನ್ನು ಓದುವ ಗೀಳು ಬೆಳೆಸಿಕೊಂಡ. ಮಹತ್ತ್ವಾಕಾಂಕ್ಷಿಯಾಗಿದ್ದ ಈತ ತನ್ನ ಭವಿಷ್ಯದ ಉಜ್ಜ್ವಲತೆಯ ಬಗ್ಗೆ ತುಂಬ ಆತ್ಮ ವಿಶ್ವಾಸ ತಳಿದಿದ್ದ. ಈತನ ಶಾಲಾ ಜೀವನದ ಅನುಭವಗಳೆಲ್ಲ ಲೂಯಿಲ್ಯಾಂಬರ್ಟ್ (1832) ಎಂಬ ಕೃತಿಯಲ್ಲಿ ಪ್ರತಿಬಿಂಬಿತವಾಗಿವೆ.

ಮಗ ವಕೀಲನಾಗಬೇಕೆಂದು ತಂದೆಯ ಅಪೇಕ್ಷೆಯಾಗಿತ್ತು. ಪ್ಯಾರಿಸ್ ವಿಶ್ವವಿದ್ಯಾಲಯಕ್ಕೆ ಸೇರಿದ ಸೋರ್ಬೊನ್ ಲಾ ಕಾಲೇಜಿನಲ್ಲಿ ಓದುತ್ತ, ವಕೀಲರೊಬ್ಬರ ಬಳಿ ಗುಮಾಸ್ತನಾಗಿ ವ್ಯಾವಹಾರಿಕ ಅನುಭವ ಪಡೆಯುವ ವ್ಯವಸ್ಥೆಯೂ ಆಯಿತು. ಆದರೆ ಲೇಖಕವೃತ್ತಿಯನ್ನೇ ಅವಲಂಬಿಸುವ ದೃಢನಿಶ್ಚಯ ಮಾಡಿ ತಂದೆಯ ಒಪ್ಪಿಗೆ ಪಡೆದು 1819ರಲ್ಲಿ ಪ್ಯಾರಿಸ್‍ನಲ್ಲಿ ಹೊಸ ಜೀವನ ಆರಂಭಿಸಿದ. ಕ್ರಾಮ್‍ವೆಲ್ ಎಂಬ ದುರಂತ ಕಾವ್ಯನಾಟಕ ಈತನ ಮೊದಲ ಕೃತಿ. ಅದಕ್ಕೆ ಅಷ್ಟೇನೂ ಪ್ರೋತ್ಸಾಹ ದೊರೆಯಲಿಲ್ಲ. ಬಾಲ್ಜಾಕ್ ನಿರಾಶನಾಗದೆ ನಾಟಕಗಳ ಜೊತೆಗೆ ಕಟ್ಟುಕತೆಗಳನ್ನು ಬರೆಯತೊಡಗಿದ. ಜೀವನೋಪಾಯಕ್ಕಾಗಿ ವ್ಯಾಪಾರ ಮಾಡಲು ಹೋಗಿ ನಷ್ಟಕ್ಕೊಳಗಾದ. 1830ರ ಅನಂತರ ಪತ್ರಿಕೋದ್ಯಮಕ್ಕಿಳಿದು ಹಲವು ಬಗೆಯ ಲೇಖನಗಳನ್ನು ಬರೆದ. ಕೆಲವು ಮಾಸಿಕಗಳನ್ನು ಸ್ವತಃ ಆರಂಭಿಸಿ ವಿಫಲನಾದ. ಪತ್ರಿಕೆಗಳಲ್ಲಿ ಧಾರಾವಾಹಿ ಕಾದಂಬರಿಗಳನ್ನು ಪ್ರಕಟಿಸಿದ.
ಲೇಖನದಿಂದ ಹಣಸಂಪಾದನೆ ಆಗದೆಂದು ಪ್ರಕಾಶಕನಾದ, ಮುದ್ರಕನಾದ. ಅದರಲ್ಲೂ ಅಪಾರ, ನಷ್ಟಪಟ್ಟು, ಸಾಲಗಾರನಾದ. ವಿಲಾಸಜೀವನ ದುಂದುಗಾರಿಕೆಗಳಿಂದಾಗಿ ಮತ್ತಷ್ಟು ಸಾಲ, ಸಾಲ ತೀರಿಸಲು ಮತ್ತೆ ಬೇರೆ ಕಡೆ ಸಾಲ ಹೀಗೆ ಇಡೀ ಜೀವನಪರ್ಯಂತ ಸಾಲದಲ್ಲಿ ಮುಳುಗಿದ. ಮುಂದೆ ಪ್ರಸಿದ್ಧ ಕಾದಂಬರಿಕಾರನಾಗಿ ಸೊಗಸಾದ ಭಾರಿ ಬಂಗಲೆ ಕಟ್ಟಿಸಿದಾಗಲೂ ಸಾಲಗಾರನಿಂದ ತಪ್ಪಿಸಿಕೊಳ್ಳಲು ಸುರಂಗಮಾರ್ಗವೊಂದನ್ನು ಮಾಡಿಸಿಕೊಂಡಿದ್ದನಂತೆ.

1829ರಲ್ಲಿ ಬಂದ ಲೇ ಡೆರ್‍ನಿಯರ್ ಚೌವಾನ್ ಯಶಸ್ಸು, ಕೀರ್ತಿ ತಂದಿತು. ಅನೇಕ ಪ್ರತಿಷ್ಠಿತ ಮಹಿಳೆಯರು ಮೆಚ್ಚಿ ಧನಸಹಾಯ ಮಾಡಿದರು. ಇದೊಂದು ವರ್ಣಮಯ ಐತಿಹಾಸಿಕ ಕಾದಂಬರಿ. ವಾಲ್ಟರ್‍ಸ್ಕಾಟ್‍ನ ಪ್ರಭಾವ ಇದರ ಮೇಲಿದೆ. ಅನಂತರ 20 ವರ್ಷಗಳಲ್ಲಿ ಬಾಲ್ಜಾಕ್ 85 ಕಾದಂಬರಿಗಳನ್ನು ಬರೆದ. ಜೊತೆಗೆ ಹಲವಾರು ಕಟ್ಟುಕತೆಗಳನ್ನು ಪ್ರಕಟಿಸಿದ. ಮೊದಮೊದಲು ಅದ್ಭುತ ರೋಮಾಂಚಕ ಕತೆಗಳನ್ನು ಬರೆಯುತ್ತಿದ್ದು ಅನಂತರ ವಾಸ್ತವ ಕತೆಗಳ ರಚನೆಗೆ ತೊಡಗಿದ. ಪತ್ರಿಕೆಗಳಿಗೆ ವಿವಿಧ ವಿಷಯಗಳನ್ನು ಕುರಿತ ಲೇಖನಗಳು, ನಾಟಕಗಳು ಸ್ನೇಹಿತರಿಗೆ ಓದುಗರಿಗೆ, ವಿಶೇಷವಾಗಿ ತಂಗಿಗೆ ಬರೆದ ಸುದೀರ್ಘ ಪತ್ರಗಳು-ಹೀಗೆ ನಿತ್ಯ 16-18 ಘಂಟೆಗಳ ಕಾಲ ಸತತವಾಗಿ ಕೂತು ಬರೆಯುತ್ತಿದ್ದ.

ಬಾಲ್ಜಾಕನಿಗೆ ತನ್ನ ಕಾಲದ ಇತಿಹಾಸಕಾರನಾಗುವ ಹಂಬಲ ಇತ್ತು. 1841ರ ವೇಳೆಗೆ ಹನ್ನೆರಡಕ್ಕೂ ಹೆಚ್ಚು ಐತಿಹಾಸಿಕ ಕಾದಂಬರಿಗಳನ್ನು ಬರೆದ. ಐತಿಹಾಸಿಕ ಸ್ಥಳಗಳನ್ನು ಸಂದರ್ಶಿಸುವ ಸಲುವಾಗಿ ವ್ಯಾಪಕ ಪ್ರವಾಸಮಾಡಿದ. ಬಾಲ್ಜಾಕ್ ಸೂಕ್ಷ್ಮಮತಿ: ಅವಲೋಕನಶಕ್ತಿ ಅಪಾರವಾಗಿತ್ತು. ಈತನ ದೃಷ್ಟಿಗೆ ಬೀಳದ ವಿಷಯವೇ ಇರಲಿಲ್ಲ. ಜೊತೆಗೆ ಅಸಾಧಾರಣ ಕಲ್ಪನಾಶಕ್ತಿ, ಭಾಷಾಪ್ರಭುತ್ವ ಸೇರಿ ಕಾದಂಬರಿಗಳಲ್ಲಿ ಸನ್ನಿವೇಶಗಳನ್ನು ಸವಿವರವಾಗಿಯೂ ವರ್ಣಮಯವಾಗಿಯೂ ಚಿತ್ರಿಸುತ್ತಿದ್ದ. ಸುದೀರ್ಘವಾಗಿ ಬೆಳೆದು ಬಂದ ಕತೆಯನ್ನು ಕ್ಷಿಪ್ರವಾಗಿ ಪರಾಕಾಷ್ಠೆಗೆ ಕೊಂಡೊಯ್ಯುವುದು ಈತನ ವೈಶಿಷ್ಟ್ಯ.

ಈತನ ಕಾದಂಬರಿಗಳು ಸ್ವಯಂಪೂರ್ಣವೆಂಬಂತೆ ಬೇರೆ ಬೇರೆ ಕತೆಗಳನ್ನು ಹೇಳಿದರೂ ಮಾನವನ ಬದುಕಿನ ವಿವಿಧ ಮುಖಗಳನ್ನು ತೋರಿಸುವ ಬೃಹತ್ ವಸ್ತುವೊಂದಕ್ಕೆ ಸೇರಿದ ಭಾಗಗಳಂತೆ ಆಂತರಿಕ ಸಂಬಂಧದ ಸೂತ್ರದಲ್ಲಿ ಪೋಣಿಸಿದ ಮಣಿಗಳಂತೆ ಇವೆ. ಅವೆಲ್ಲವನ್ನೂ ಒಟ್ಟಾಗಿ ನೋಡಿದಾಗ ಮಹಾಕಾವ್ಯದ ಹರವು ಇರುವುದು ಕಾಣದೆ ಇರದು. ಬಾಲ್ಚಾಕ್ ತನ್ನ ಕತೆ, ಕಾದಂಬರಿ, ನಾಟಕಗಳಲ್ಲಿ ಸುಮಾರು ಮೂರು ಸಾವಿರ ಕಾಲ್ಪನಿಕ ಪಾತ್ರಗಳನ್ನು ಸೃಷ್ಟಿಸಿದ್ದಾನೆ. ಜೊತೆಗೆ ಪ್ರಸಿದ್ಧ ಐತಿಹಾಸಿಕ ವ್ಯಕ್ತಿಗಳನ್ನು ಅವರವರ ನಿಜವಾದ ಹೆಸರಿನಲ್ಲೇ ತಂದಿದ್ದಾನೆ. ಮಾನವ ಸ್ವಭಾವದ ಎಲ್ಲ ಮುಖಗಳನ್ನೂ ತೋರಿಸಿದ್ದಾನೆ. ಇಂಗ್ಲೆಷ್ ಸಾಹಿತ್ಯದಲ್ಲಿ ಡಿಕನ್ಸ್ ಇರುವಂತೆ ಫ್ರೆಂಚ್ ಸಾಹಿತ್ಯದಲ್ಲಿ ಬಾಲ್ಜಾಕ್. ವಿವಿಧ ಪಾತ್ರ ಚಿತ್ರಣದಲ್ಲಿ ಈತನ ಆದ್ಭುತ ಕೌಶಲ ವ್ಯಕ್ತವಾಗುತ್ತದೆ. ಸೃಜಿಸಿದ ಪಾತ್ರಗಳಲ್ಲಿ ಕೆಲವು ವಿಶಿಷ್ಟವೆನಿಸಿ ಚಿರಸ್ಮರಣೀಯವಾಗಿವೆ. ಇನ್ನು ಕೆಲವು ವಾಸ್ತವ ಬದುಕಿನಲ್ಲಿ ಕಾಣಬರುವ ಕೆಲವು ಮಾದರಿಗಳ ಪಡಿಯಚ್ಚಿನಂತಿವೆ. ಯೂರೊಪಿನ ನಾಗರಿಕ ಸಮಾಜದ, ಇಡೀ ಯುಗದ ಸಮಗ್ರ ಚಿತ್ರ ಬಾಲ್ಜಾಕನ ಕತೆ-ಕಾದಂಬರಿಗಳಲ್ಲಿ ಪ್ರತಿಬಿಂಬಿತವಾಗಿದೆ. ಆದರೆ ಈತ ಸೃಜಿಸಿದ ದುಷ್ಟ ಸ್ವಭಾವದ ಪಾತ್ರಗಳು ಮನಸ್ಸಿನ ಮೇಲೆ ಅಚ್ಚೊತ್ತಿದಷ್ಟು ಚೆನ್ನಾಗಿ ಸಭ್ಯ ನಾಯಕ ಪಾತ್ರಗಳು ರೂಪುಗೊಂಡಿಲ್ಲ.

ಜೀವನದ ವಿವಿಧ ಅನುಭವಗಳನ್ನು ನಾನಾ ಮುಖಗಳನ್ನು ತನ್ನ ಕೃತಿಗಳಲ್ಲಿ ಚಿತ್ರಿಸುವಾಗ ಬಾಲ್ಜಾಕ್ ಕಂಡುಕೊಂಡದ್ದು ತ್ಯಾಗ ಮತ್ತು ನಿಷ್ಠೆಗಳಿಂದ ಕೂಡಿದ ಪರಿಪೂರ್ಣ ಪ್ರೇಮ. ಇದರ ಅನ್ವೇಷಣೆಯಲ್ಲಿ ಅಳೆಯುವ ಮಾನವನ ಪಾಡನ್ನು ಗಂಭೀರವಾಗಿ ಚಿತ್ರಿಸುವುದರಲ್ಲಿ ಸಮಗ್ರ ಜೀವನದರ್ಶನವನ್ನೇ ಮಾಡಿಸುತ್ತಾನೆ. ಡಾಂಟೆ ಮಹಾಕವಿಯ ಡಿವೈನ್ ಕಾಮೆಡಿಯಿಂದ ಸ್ಫೂರ್ತಿತನಾಗಿ ಈತ ತನ್ನ ಕೃತಿಗಳನ್ನು ವಿಂಗಡಿಸಿ ಮಾನವನ ಜೀವನ ದರ್ಶನವನ್ನು ಮೂಡಿಸುವ ಸಂಯೋಜಿತ ಶಿಲ್ಪದ ಮಾದರಿಯಲ್ಲಿ ಜೋಡಿಸುವ ಬೃಹತ್ ಯೋಜನೆ ಹಾಕಿಕೊಂಡ. ಈ ಸಮಸ್ತ ಕೃತಿ ಶ್ರೇಣಿಗೆ ಲಾ ಕಾಮೆಡಿ ಹ್ಯೂಮೇನ್ ಎಂಬ ಹೆಸರು ಕೊಟ್ಟ, ಅದುವರೆಗಿನ ತನ್ನ ಕತೆ-ಕಾದಂಬರಿ-ನಾಟಕಗಳನ್ನು ಜೊತೆಗೆ ಈ ಬೃಹತ್ ವಸ್ತುವಿಗೆ ಪೂರಕವಾಗುವಂಥ ಇನ್ನು ಐವತ್ತೊಂದು ಕೃತಿಗಳನ್ನು ರಚಿಸಿ ಒಟ್ಟು 133 ಸಂಪುಟಗಳಲ್ಲಿ ಪ್ರಕಟಿಸುವ ಭಾರೀ ಯೋಜನೆ ಹಾಕಿಕೊಂಡು ಕಾರ್ಯಪ್ರವರ್ತನಾದ. ಆದರೆ ಆತ ಹೊಸದಾಗಿ ಬರೆಯಲೆಂದು ಗುರುತು ಮಾಡಿಕೊಂಡ ಐವತ್ತೊಂದು ಕೃತಿಗಳಲ್ಲಿ ಪೂರ್ಣವಾದದ್ದು ಒಂದೇ. ಈ ಪ್ರಮಾಣದ ಯೋಜನೆಯನ್ನು ಪ್ರಪಂಚದ ಯಾವ ಕಾದಂಬರಿಕಾರನೂ ಮಾಡಿಲ್ಲ. ಅಷ್ಟು ಪ್ರಮಾಣದಲ್ಲಿ ಬರೆದೂ ಇಲ್ಲ.

1845ರ ವೇಳೆಗೆ 26 ಸಂಪುಟಗಳನ್ನು ಪ್ರಕಟಿಸುವ ಆಸೆ ಈಡೇರದೆ 1838ರಲ್ಲಿ 17 ಸಂಪುಟಗಳು ಮಾತ್ರ ಹೊರಬಂದುವು. 19ನೆಯ ಸಂಪುಟದಲ್ಲಿ ನಾಟಕಗಳು, 20ನೆಯ ಸಂಪುಟದಲ್ಲಿ ಕಾಂಟೆಸ್ ಡ್ರೋಲೆಟಿಕ್ಸ್ ಎಂಬ ಕೃತಿ ಸೇರಿವೆ. ಬಾಲ್ಜಾಕ್ ಈ ಕೃತಿ ಶ್ರೇಣಿಯನ್ನು ಮೂರು ವಿಭಾಗಗಳಾಗಿ ವಿಂಗಡಿಸಿದ. ಎಟ್ಯೂಡಿಸ್ ಡಿ ಮೊಯುರ್ಸ್ ಎಂಬ ಮೊದಲ ವಿಭಾಗದಲ್ಲಿ ವ್ಯಕ್ತಿಯ ಖಾಸಗಿ ಜೀವನದಿಂದ ಹಿಡಿದು ಹಳ್ಳಿ ನಗರ ಪ್ರಾಂತ್ಯಗಳ ವಿಸ್ತøತ ಸಾರ್ವಜನಿಕ ಜೀವನ, ರಾಜಕಾರಣ, ಸೇನಾ ಜೀವನಗಳವರೆಗೆ ಸಾಮಾಜಿಕಚಿತ್ರವನ್ನು ಕೊಡುವ ಕತೆ ಕಾದಂಬರಿಗಳನ್ನು ಸೇರಿಸಿದ್ದಾನೆ. ಎರಡನೆಯ ವಿಭಾಗದಲ್ಲಿ ತಾತ್ತ್ವಿಕ ಅಧ್ಯಯನಗಳನ್ನು ಸೇರಿಸಿ ಎಟ್ಯೂಡಿಸ್ ಡಿ ಫಿಲಸಾಫಿಕ್ಸ್ ಎಂದು ಕರೆದಿದ್ದಾನೆ. ಮೂರನೆಯದು ಎಟ್ಯೂಡಿಸ್ ಡಿ ಅನಾಲಿಟಿಕ್ಸ್-ವಿಶ್ಲೇಷಣಾತ್ಮಕ ಲೇಖನಗಳ ವಿಭಾಗ; ಈ ಸಮಗ್ರ ಕೃತಿಯಲ್ಲಿ ಒಟ್ಟು 91 ಕೃತಿಗಳಿವೆ. ಇದರ ಮಾರಾಟ ನಿರಾಶಾಜನಕವಾಗಿತ್ತು. ಬಾಲ್ಜಾಕನ ಮರಣೋತ್ತರ ಹ್ಯೂಮನ್ ಕಾಮೆಡಿ ಸಂಪುಟಗಳು ಎರಡನೆಯ ಮುದ್ರಣ ಕಂಡವು.
ಬಾಲ್ಜಾಕನ ಹಲವು ಪ್ರಣಯ ಪ್ರಸಂಗಗಳಲ್ಲಿ ಕೊನೆಯವರೆಗೂ ಸ್ಥಿರವಾಗಿ ನಿಂತುದು ಪೋಲಿಷ್ ಶ್ರೀಮಂತ ಸರದಾರನೊಬ್ಬನ ಪತ್ನಿ ಮದಾಮ್ (ಕೌಂಟೆಸ್ ಡಿ) ಹನ್ಸ್‍ಕಾಳೊಡನೆ ಇದ್ದ ಬಾಂಧವ್ಯ. ಬಾಲ್ಜಾಕನ ಬರೆಹದ ಮೋಡಿಯನ್ನು ಮೆಚ್ಚಿದ ಓದುಗಳಾಗಿ ಪತ್ರ ಬರೆದು ಪರೆಚಿತಳಾದ ಈಕೆ ಸ್ನೇಹಿತಳಾಗಿ ಪ್ರಿಯತಮೆಯಾಗಿ, ಬರೆಹಕ್ಕೆ ಸ್ಫೂರ್ತಿದಾಯಿನಿಯಾಗಿ ಬೆಳದು ಬಾಲ್ಜಾಕನ ಹೃದಯದಲ್ಲಿ ನಿಂತಳು.

1830-42ರ ಅವಧಿ ಬಾಲ್ಜಾಕನ ಸಾಹಿತ್ಯದ ಪ್ರಥಮ ಯಶಸ್ಸಿನಕಾಲ. 1842ರ ತನಕ ಈತನ ಸಾಹಿತ್ಯದ ಉತ್ಕರ್ಷಕಾಲ. ಅನಂತರ ಅದರ ಇಳಿಮುಖ. ಮದಾಮ್ ಹನ್ಸ್‍ಕಾ ಸೂಚಿಸಿದ ವಸ್ತುಗಳನ್ನು ಕುರಿತ ಮಾಡೆಸ್ಟ್‍ಮಿನಾನ್ ಬಳಿಕ ಲಾ ಕಸಿóನ್ ಬೆಟ್ಟಿ (1846) ಮತ್ತು ಲೆ ಕಸಿನ್ ಪಾನ್ಸ್ (1847) ಕೃತಿಗಳೇ ಬಾಲ್ಜಾಕನ ಕಡೆಯ ಕೃತಿಗಳು.
ಕೀರ್ತಿಶಾಲಿಯಾಗಿ ಪ್ರತಿಷ್ಠಿತ ಶ್ರೀಮಂತ ಸಮಾಜದಲ್ಲಿ ಮನ್ನಣೆ ಪಡೆದು ಸೊಗಸುಗಾರನಾಗಿ ಓಡಾಡಿದರೂ ಬಾಲ್ಜಾಕನ ವ್ಯೆಯಕ್ತಿಕ ಜೀವನ ದುರ್ಭರವಾಗಿತ್ತು. ಆರ್ಥಿಕ ಮುಗ್ಗಟ್ಟಿನಿಂದ, ಸಾಲಗಾರನಾಗಿ ಸಂಕಟ ಪರಿಸ್ಥಿತಿಗೆ ಒಳಗಾದುದು ಈತನ ಇನ್ನೊಂದು ಅವಸ್ಥೆ. ಮದುವೆಯಾಗಿ ಸುಖಜೀವನ ನಡೆಸಬೇಕು ಎಂಬ ಹಂಬಲ ಈಡೇರದೆ ಇದ್ದುದು ಈತನ ಜೀವನದಲ್ಲಿ ತುಂಬಲಾರದ ಕೊರತೆ. ಮದಾಮ್‍ಹನ್ಸ್‍ಕಾಳ ಪ್ರೇಮವೊಂದೇ ಈತನ ಖಾಸಗಿ ಜೀವನದ ಒಂದು ಭಾಗ್ಯ. 1845ರಿಂದ 48ರ ತನಕ ಈಕೆಯೊಂದಿಗೆ ಐರೋಪ್ಯ ಪ್ರವಾಸ ಮಾಡುವ ಸಂದರ್ಭಗಳು ಈತನ ಜೀವನದ ಅತ್ಯಂತ ಸುಖದ ದಿನಗಳು. ಕಡೆಗೆ 1850ರಲ್ಲಿ ಈಕೆಯನ್ನು ಮದುವೆಯೂ ಆದ. 1848ರಿಂದಲೇ ಈತನ ಆರೋಗ್ಯ ಕುಸಿಯತೊಡಗಿತ್ತು. ಮದುವೆಯಾದ ಐದೇ ತಿಂಗಳಲ್ಲಿ 1850ರ ಆಗಸ್ಟಿನಲ್ಲಿ ಬಾಲ್ಜಾಕ್ ನಿಧನ ಹೊಂದಿದ.							(ಕೆ.ಬಿ.ಪಿ.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ